May 16, 2019

ಶ್ರೀ ಬ್ರಹ್ಮಣ್ಯ ತೀರ್ಥರು

ಅಬ್ಬೂರು ಇದು ಚನ್ನಪಟ್ಟಣದಿಂದ ನಾಲ್ಕು ಕಿ.ಮೀ. ದೂರದಲ್ಲಿರುವ ಒಂದು ಪುಟ್ಟ ಗ್ರಾಮ. ಸೂರ್ಯಾಂಶ ಸಂಭೂತರೆಂದೇ ಪ್ರಸಿದ್ಧರಾದ ಮಧ್ವಮತದ ಮುನಿಪುಂಗವರಾಗ ಶ್ರೀ ಬ್ರಹ್ಮಣ್ಯ ತೀರ್ಥರಿಂದ ಪವಿತ್ರಗೊಂಡ ಕ್ಷೇತ್ರ. ಶ್ರೀ ಬ್ರಹ್ಮಣ್ಯ ತೀರ್ಥರು ನೆಲೆಸಿದ ಪುಣ್ಯಭೂಮಿ ಇದು. ಕಣ್ವ ತೀರ್ಥ ಎಂಬ ನದಿಯಿಂದ ಸುತ್ತುವರಿದ ಈ ಗ್ರಾಮವು ಕಣ್ವ ಮಹಾಋಷಿಗಳು ನಡೆದಾಡಿ ಪವಿತ್ರಗೊಳಿಸಿದ ತಪೋಭೂಮಿ. ಐತಿಹಾಸಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಗುರುತಿಸಿಕೊಂಡ ಸಾಧನ ಭೂಮಿ ಅಬ್ಬೂರು. ಶ್ರೀ ಬ್ರಹ್ಮಣ್ಯ ತೀರ್ಥರೆಂಬ ಮಹಾಮುನಿಗಳ ಮೂಲ ವೃಂದಾವನ ಸನ್ನಿದಾನ ಈ ಅಬ್ಬೂರು.
ಸಂಚಾರ ಮತ್ತು ಪವಾಡ
ಬ್ರಹ್ಮಣ್ಯ ತೀರ್ಥರು ಒಬ್ಬ ಅಪ್ರತಿಮ ಪಾಂಡಿತ್ಯದ ಘನಿ. ಮಧ್ವಮತದ ಪ್ರಚಾರಕ್ಕಾಗಿ ಆಸೇತು ಹಿಮಾಚಲದವರೆಗೂ ಸಂಚರಿಸಿ, ದುರ್ವಾದಿಗಳನ್ನು ಖಂಡಿಸುತ್ತಾ ಜಯಪ್ರತಗಳು ಮಾನ ಸನ್ಮಾನಗಳನ್ನು ಗಳಿಸಿಕೊಂಡು ಬ್ರಹ್ಮ ಜ್ಞಾನಿಗಳು. ತಮ್ಮ ಕಾಲದಲ್ಲಿ ಅಬ್ಬೂರು ಮತ್ತು ಚನ್ನಪಟ್ಟಣದ ಸುತ್ತಮುತ್ತಲಿನಲ್ಲಿ ಬೇಡಿ ಬಂದ ಆರ್ತರಿಗೆ ಆಹಾರ ಮತ್ತು ಆಶ್ರಯಗಳನ್ನು ಕೊಟ್ಟು ಅನೇಕ ಕೆರೆ ಅಗ್ರಹಾರಗಳು ನಿರ್ಮಿಸಿ ಸಮಾಜ ಸುಧಾರಣೆ ಗೈದ ಧೀಮಂತರು. ವಿಜಯನಗರ ಸಾಮ್ರಾಜ್ಯದ ಆರು ರಾಜರಿಗೆ ರಾಜಗುರುಗಳಾಗಿದ್ದ ಶ್ರೀ ವ್ಯಾಸರಾಜರು ಇವರ ಆಶ್ರಮ ಶಿಷ್ಯರು. ವ್ಯಾಸರಾಜರಂತಹ ಅಪ್ರತಿಮ ಜ್ಞಾನಿಗಳನ್ನು ನಾಡಿಗೆ ನೀಡಿದ ಕೀರ್ತಿ ಬ್ರಹ್ಮಣ್ಯ ಗುರುಗಳದು.
ಒಮ್ಮೆ ಸಂಚಾರ ಮಾಡುತ್ತಾ ಕೃಷ್ಣ ದೇವರಾಯನ ಆಳ್ವಿಕೆಯಿದ್ದ ವಿಜಯನಗರ ಸಾಮ್ರಾಜ್ಯಕ್ಕೆ ಕೃಷ್ಣದೇವರಾಯನ ಪ್ರಾರ್ಥನೆಯಂತೆ ಆಗಮಿಸಿದಾಗ ಅಲ್ಲಿ ಜಲಕ್ಷಾವ, ಭೀಕರ ಬರಗಾಲ ಉಂಟಾಗಿತ್ತು. ಕೃಷ್ಣದೇವರಾಯ ಮತ್ತು ಅಲ್ಲಿನ ಜನರು ಬ್ರಹ್ಮಣ್ಯ ತೀರ್ಥರಲ್ಲಿ ತಮಗೆ ಬಂದೊದಗಿದ ಸಮಸ್ಯೆ ಪರಿಹರಿಸಬೇಕೆಂದು ಭಕ್ತಿಯಿಂದ ಪ್ರಾರ್ಥಿಸಿದಾಗ ಲೋಕ ಕಲ್ಯಾಣಕ್ಕಾಗಿ ತಮ್ಮ ಶಿಷ್ಯರಿಂದ ಪರ್ಜನ್ಯ ಹೋಮ ಮಾಡಿಸಿದರು. ಹೋಮ ನಡೆಯುತ್ತಿರುವಾಗಲೇ ಧಾರಾಕಾರವಾಗಿ ಮಳೆ ಸುರಿದ ಕೆರೆಗಳು ತುಂಬಿಕೊಂಡು ಜಲಕ್ಷಾಮ, ಬರಗಾಲ ನೀಗಿಸಿದರು ತಮ್ಮ ಅಗಾಧ ತಪಃಶಕ್ತಿಯಿಂದ. ಸಂತುಷ್ಟನಾದ ಕೃಷ್ಣದೇವರಾಯನು ಅನೇಕ ಗ್ರಾಮಗಳು ಉಂಬುಳಿಯಾಗಿ ಭಕ್ತಿಯಿಂದ ಬ್ರಹ್ಮಣ್ಯ ತೀರ್ಥರ ಮಠಕ್ಕೆ ಕೊಟ್ಟಿನು. ಅದರಲ್ಲಿ ಚನ್ನಪಟ್ಟಣದ ಹತ್ತಿರವಿರುವ ಬ್ರಹ್ಮಣ್ಯಪುರವು ಒಂದು.
ವೃಂದಾವನ ಪ್ರವೇಶ
ಇಂತಹ ಮಹಾಮಹಿಮರಾದ, ಸಮಾಜೋದ್ಧಾರಕರಾದ ಭಾಸ್ಕರ ಸಂಭೂತರಾದ ಶ್ರೀ ಬ್ರಹ್ಮಣ್ಯ ತೀರ್ಥರು ಸಾರ್ವಜಿತ್ ನಾಮ ಸಂವತ್ಸರದ ವೈಶಾಖ ಮಾಸದ ಕೃಷ್ಣಪಕ್ಷದ ಏಕಾದಶಿಯಂದು ೧೪೬೭ರಲ್ಲಿ ಅಬ್ಬೂರಿನ ಕಣ್ವ ನದಿ ತಟದಲ್ಲಿ ವೃಂದಾವನ ಪ್ರವೇಶ ಮಾಡಿದರು. ಇವರ ವೃಂದಾವನ ದರ್ಶನ, ಪ್ರದಕ್ಷಿಣೆ, ನಮಸ್ಕಾರ ಮಾತ್ರದಿಂದಲೇ ಅನೇಕ ರೋಗಗಳ ಪರಿಹಾರ ಮತ್ತು ಬೇಡಿ ಬಂದ ಭಕ್ತರಿಗೆ ಆರೋಗ್ಯ, ಐಶ್ವರ್ಯಾದಿಗಳು ಇಂದಿಗೂ ಒಂದಂಶದಿಂದ ವೃಂದಾವನದಲ್ಲಿ ನೆಲೆಸಿ ಅನುಗ್ರಹಿಸುತ್ತಿದ್ದಾರೆ. ವೃಂದಾವನದಲ್ಲಿ ಇದ್ದುಕೊಂಡೇ ಅನೇಕ ಕಾಯಿಲೆಗಳು ಪರಿಹರಿಸಿದ ದೃಷ್ಟಾಂತಗಳಿವೆ.

ಶ್ರೀ ಬ್ರಹ್ಮಣ್ಯ ತೀರ್ಥರ ಮೂಲ ಬೃಂದಾವನ ಅಬ್ಬೂರು.
ಕಲಿಯುಗದ ಕಲ್ಪವೃಕ್ಷ ಕಾಮಧೇನುಗಳಾದ, ಸೂರ್ಯಾಂಶ ಸಂಭೂತರಾದ, ಶ್ರೀ ವ್ಯಾಸರಾಯರ ಆಶ್ರಮದ ಗುರುಗಳಾದ ಈ ಅವತಾರ ಪುರುಷರು ಈ ದಿನ ( ವೈಶಾಖ ಮಾಸದ ಕೃಷ್ಣ ಪಕ್ಷದ ಏಕಾದಶಿ , ಕ್ರಿಸ್ತಶಕ 1467 )  ಬೃಂದಾವನ ಪ್ರವೇಶ ಮಾಡಿದ ಸುದಿನ. 
ವೈಶಾಖ ಕೃಷ್ಣಪಕ್ಷೇಸಾವೇಕಾದಶ್ಯಾಂ ಗುರೂತ್ತಮ:
ನಭೋ ಮಧ್ಯಗತೇರ್ಯಮ್ಣಿ ಸ್ವರೂಪೇಲೀಯತ  ಪ್ರಭು:
( ಶ್ರೀ ಬ್ರಹ್ಮಣ್ಯ ತೀರ್ಥ ವಿಜಯ:)
       ಶ್ರೀ ಬ್ರಹ್ಮಣ್ಯತೀರ್ಥರು ಉಡುಪಿ ಪ್ರಾಂತ್ಯದ ತೋಟಂತಿಲ್ಲಾಯ  ಮನೆತನದವರು ಎಂಬುದು ಘಟ್ಟದ ಮೇಲಿನ ಮಠಗಳಿಗೂ, ಉಡುಪಿ ಪ್ರಾಂತ್ಯಕ್ಕೂ ಇರುವ ಸಂಬಂಧದ ಬಗ್ಗೆ ಹೊಸ ಬೆಳಕನ್ನು ಚೆಲ್ಲುವ ಅಪೂರ್ವವಾದ ವಿಷಯ. ಜಗದ್ಗುರುಗಳಾದ ಶ್ರೀ ವ್ಯಾಸರಾಜಂತಹ ಯತಿವರೇಣ್ಯರನ್ನು ಜಗತ್ತಿಗೆ ನೀಡಿದ ಮಹಾಪ್ರಭುಗಳು ಶ್ರೀ ಬ್ರಹ್ಮಣ್ಯತೀರ್ಥರು.
ಜ್ಞಾನ ಮಂಟಪ ಕ್ಷೇತ್ರವಾದ ಅಬ್ಬೂರಿನಲ್ಲಿ ಇಂದಿಗೂ ತಮ್ಮ ವೃಂದಾವನದ ಒಳಗೆ ಇದ್ದುಕೊಂಡು ಭಕ್ತರ ಸಕಲಾಭಿಷ್ಠ ಗಳನ್ನು ಈಡೇರಿಸುವ ಕಲ್ಪವೃಕ್ಷ ಕಾಮಧೇನು, ನೊಂದವರನ್ನು ಕರುಣಾ ಮೃತಲೋಚನದಿಂದ ಸಂತೈಸುವ ಕೃಪಾಪೂರ್ಣರು, ಪುಣ್ಯ ಚರಿತರು, ಸತ್ತವರನ್ನು ಬದುಕಿಸಬಲ್ಲ ಅಸಾಧಾರಣ ಮಹಿಮೆಯ ಅಮೃತ ಹಸ್ತರು,  ಇವರ ಸ್ಮರಣೆ, ನಾಮೋಚ್ಚಾರಣೆ, ಗುಣ ಕೀರ್ತನೆ,  ಚರಿತ್ರೆ ಚಿಂತನೆ ಮೊದಲಾದುವುಗಳು ಸಹ ಭಕ್ತಜನರ ಉದ್ಧಾರ ಸಾಧನ.
     ಬ್ರಾಹ್ಮಣರು ಮಾತ್ರವಲ್ಲದೆ, ಎಲ್ಲ ಪಂಗಡದ ಜನರು ಶ್ರೀ ಬ್ರಹ್ಮಣ್ಯತೀರ್ಥರ ಬೃಂದಾವನ ಸೇವೆಯನ್ನು ಯಥೋಚಿತವಾಗಿ ಮಾಡಿ ಇಷ್ಟಾರ್ಥಗಳನ್ನು ಪಡೆಯುತ್ತಿರುವರು. ದನಕರುಗಳ ವ್ಯಾಧಿಗಳನ್ನು ಸಹ ಈ ಬೃಂದಾವನ ಸೇವೆಯಿಂದ ಪರಿಹರಿಸಿಕೊಳ್ಳುವ ಭಕ್ತರೂ ಆ  ಪ್ರಾಂತ್ಯದಲ್ಲಿ ಕಂಡುಬರುವರು.
     ಇಂತಹ ಮಹಾನ್ ಯತಿವರೇಣ್ಯರ ನಾಮಸ್ಮರಣೆಯಿಂದ, ಬೃಂದಾವನ ಸೇವೆಯಿಂದ, ಮೃತ್ತಿಕಾ ಧಾರಣೆಯಿಂದ, ಎಲ್ಲಾ ಕಠಿಣ ತರದ ವ್ಯಾಧಿಗಳೂ ಗುಣವಾಗುವುದು, ಭೂತ ಪ್ರೇತಾದಿ ಪೀಡೆಗಳು ನಾಶವಾಗುವುದು, ಎಂಬುದನ್ನು ಸ್ವತಃ ಶಿಷ್ಯರಾದ ಶ್ರೀ ವ್ಯಾಸರಾಯರು ತಮ್ಮ " ಶ್ರೀ ಬ್ರಹ್ಮಣ್ಯ ತೀರ್ಥ ಪಂಚರತ್ನ ಮಾಲಿಕ ಸ್ತೋತ್ರಂ "  ವಿಶೇಷ ಕೃತಿಯಲ್ಲಿ ತಮ್ಮ ಗುರುಗಳನ್ನು ವಿಶೇಷವಾದ ರೀತಿಯಲ್ಲಿ ಬಣ್ಣಿಸಿದ್ದಾರೆ ಅಲ್ಲದೆ ಈ ಸ್ತೋತ್ರವು ನಿತ್ಯ ಪಠನೀಯವೂ ಆಗಿದೆ.  ಶ್ರೀ ವ್ಯಾಸರಾಜರ ಆಶ್ರಮದ ಶಿಷ್ಯರಾದ ಶ್ರೀ ಶ್ರೀನಿವಾಸ ತೀರ್ಥರು ಅನೇಕ ಕೃತಿಗಳಲ್ಲಿ ಬ್ರಹ್ಮಣ್ಯತೀರ್ಥರ ಮಹಿಮೆಗಳನ್ನು ಕೊಂಡಾಡಿದ್ದಾರೆ.
     ಇಂತಹಾ ಶ್ರೀ ಅಬ್ಬೂರು ಕ್ಷೇತ್ರವು ಸಕಲ ಮಾಧ್ವರಿಗೆ ಸಕಲ ಆಸ್ತಿಕರಿಗೆ ಅತ್ಯಂತ ಪಾವನವಾದ ಕ್ಷೇತ್ರವಾಗಿದೆ.

No comments:

Post a Comment

ಸಿದ್ಧಪುರುಷ ಶ್ರೀ ವೀರೇಶ್ವರ ಸ್ವಾಮಿಗಳು,

  ಸಿದ್ಧಪುರುಷ ಶ್ರೀ ವೀರೇಶ್ವರ ಸ್ವಾಮಿಗಳು. ಶ್ರೀ ವೀರೇಶ್ವರ ಸ್ವಾಮಿಗಳು ಧಾರವಾಡ ಜಿಲ್ಲೆಯ   ಕುಂದಗೋಳ ತಾಲ್ಲೂಕಿನ ಗಳಗಿ ಗ್ರಾಮದವರು   ಹಾಗೂ ಇಂಗಳಗಿ ಮಠಪತಿ ...